ಮಂಗಳವಾರ, ಸೆಪ್ಟೆಂಬರ್ 22, 2015

ಸರ್ವಜ್ಞನ ವಚನಗಳು 136-138

136. ಮುನಿವರನ ನೆನೆಯುತಿರು | ವಿನಯದಲಿ ನಡೆಯುತಿರು |
ವನಿತೆಯರ ಬಲೆಗೆ ಸಿಲುಕದಿರು, ಸಿರಿಸುಖವು |
ಮನದಣಿಯಲಿಕ್ಕು ಸರ್ವಜ್ಞ ||

ಅರ್ಥ: ಮುನಿಗಳನ್ನು ನೆನೆಯುತ್ತಿರು. ಯಾವಾಗಲೂ ವಿನಯದಿಂದ ನಡೆಯುತ್ತಿರು ಹಾಗೂ ವನಿತೆಯರ ಬಲೆಗೆ ಸಿಲುಕದೆ ದೂರ ಇರು. ಅಂದರೆ ನಿನಗೆ ಸ್ವರ್ಗ ಸುಖವು ಮನದಣಿಯೇ ದೊರೆಯುವುದು.

137. ಕಂಡುದನು ಅಡೆ ಭೂ | ಮಂಡಲವು  ಮುನಿಯುವುದು |
ಕೊಂಡಾಡುತಿಚ್ಛೆ ನುಡಿದಿಹರೆ, ಜಗವೆಲ್ಲ |
ಮುಂಡಾಡುತಿಹುದು ಸರ್ವಜ್ಞ ||

ಅರ್ಥ: ಕಂಡದ್ದನ್ನು ಕಂಡಂತೆ ಆಡಿದರೆ (ಇಡಿಯ) ಭೂಮಂಡಲವೇ ಸಿಟ್ಟಾಗುವುದು. ಆದರೆ ಅವರನ್ನು ಕೊಂಡಾಡುತ್ತ ಹೊಗಳಿದರೆ ಮಾತ್ರ ಜಗತ್ತೇ (ನಿಮ್ಮನ್ನು) ಮುದ್ದಾಡುವುದು.

138. ತನ್ನ ದೋಷವ ನೂರ | ಬೆನ್ನ ಹಿಂದಕೆ ಇರಿಸಿ |
ಅನ್ಯನೊಂದಕ್ಕೆ ಹುಲಿಯಪ್ಪ, ಮಾನವನು |
ಕುನ್ನಿಯಲ್ಲೇನು ಸರ್ವಜ್ಞ||

ಅರ್ಥ: ತಾನು ಮಾಡಿದ ನೂರಾರು ದೋಷಗಳನ್ನು ಬೆನ್ನ ಹಿಂದೆ ಇರಿಸಿಕೊಂಡು, ಅನ್ಯರು ಮಾಡಿದ ಒಂದೇ ಒಂದು ತಪ್ಪಿಗೂ ಕೂಡ ಹುಲಿಯಂತೆ ಗರ್ಜಿಸುವವನು ನಾಯಿಯಲ್ಲದೆ ಮತ್ತೇನು?