ಶುಕ್ರವಾರ, ಸೆಪ್ಟೆಂಬರ್ 18, 2015

ಸರ್ವಜ್ಞನ ವಚನಗಳು 109-111

109. ಕರಿಕೆ ಕುದುರೆಗೆಲೇಸು | ಮರುಕು ಹೆಣ್ಣಿಗೆ ಲೇಸು |
ಅರಿಕೆಯುಳ್ಳವರ ಕೆಳೆಲೇಸು, ಸೇವಿಗೆಯ |
ಸುರುಕು ಲೇಸೆಂದ ಸರ್ವಜ್ಞ ||

ಅರ್ಥ: ಕುದುರೆಗೆ ಕರಿಕೆಯು, ಹೆಣ್ಣಿಗೆ ಒಯ್ಯಾರವು ಹಾಗೂ ಅರಿವುಳ್ಳವರ ಗೆಳೆತನವು ಒಳ್ಳೆಯದಾಗಿರುವಂತೆ ಸುರಕಿಕೊಳ್ಳಲು ಸೇವಿಗೆಯ ಪಾಯಸವೂ ಒಳ್ಳೆಯದು.

110. ಗಿಡ್ಡ ಹೆಂಡತಿ ಲೇಸು | ಮಡ್ಡಿ ಕುದುರೆಗೆ ಲೇಸು |
ಬಡ್ಡಿಯ ಸಾಲ ಕೊಡಲೇಸು, ಹಿರಿಯರಿಗೆ |
ಗಡ್ಡ ಲೇಸೆಂದ ಸರ್ವಜ್ಞ ||

ಅರ್ಥ: ಹೆಂಡತಿಯು ಗಿಡ್ಡವಾಗಿದ್ದರೆ, ಮಡ್ಡಿಯು ಕುದುರೆಗೆ ಹಾಗೂ ಕೊಡಲು ಬಡ್ಡಿಯ ಸಾಲವು ಒಳ್ಳೆಯದಾಗಿರುವಂತೆ ಹಿರಿಯರಾದವರಿಗೆ ಗಡ್ಡ ಒಳ್ಳೆಯದು.

111. ಜ್ಞಾನಿಗೆ ಗುಣಲೇಸು | ಮಾನಿನಿಗೆ ಪತಿ ಲೇಸು |
ಸ್ವಾನುಭವಿಗಳ ನುಡಿಲೇಸು, ಎಲ್ಲಕು ನಿ |
ಧಾನಿಯೆ ಲೇಸು ಸರ್ವಜ್ಞ ||

ಅರ್ಥ: ಜ್ಞಾನಿಯಾದವನಿಗೆ ಗುಣವೂ ಹೆಂಗಸರಿಗೆ ಪತಿಯೂ ಹಾಗೂ ಸ್ವಾನುಭವಿಗಳ ನುಡಿಯು ಒಳ್ಳೆಯದಾಗಿರುವಂತೆ ಪ್ರತಿಯೊಂದು ಕಾರ್ಯದಲ್ಲೂ ಅವಸರ ಮಾಡದಂಥವನು (ನಿಧಾನಿಯು) ಒಳ್ಳೆಯವನು.