40. ಎತ್ತಣಾ ಹನಿಬಿದ್ದು | ಮುತ್ತಾದ ತೆರನಂತೆ |
ಉತ್ತಮದ ಗತಿಯು ಪಡೆಯುವಡೆ, ಯತಿಗೊಂದು |
ತುತ್ತನಿಕ್ಕೆಂದ ಸರ್ವಜ್ಞ ||
ಅರ್ಥ: ಎಲ್ಲಿಯದೋ ಒಂದು ಮಳೆಯ ಹನಿ ಬಿದ್ದು ಮುತ್ತಾಗುವಂತೆ ಸದ್ಗತಿಯ ಮಾರ್ಗದರ್ಶಕನಾದ ಯತಿಗೂ ಒಂದು ತುತ್ತು ಅನ್ನವನ್ನು ನೀಡಿ ಮೋಕ್ಷ ದೊರಕಿಸಿಬಿಡು.
41. ಅನ್ನವನು ಇಕ್ಕುವ | ಅನ್ಯ ಜಾತನೆ ಕುಲಜ |
ಅನ್ನವನು ಇಕ್ಕದುಣುತಿಪ್ಪ , ಕುಲಜಾತ |
ನನ್ಯನೆಂದರಿಗು ಸರ್ವಜ್ಞ ||
ಅರ್ಥ: ಅನ್ನವನ್ನಿಕ್ಕುವವನು ಅವನು ಯಾವ ಜಾತಿಯವನೇ ಇರಲಿ ಒಳ್ಳೆಯವನೆಂದು ತಿಳಿಯತಕ್ಕದ್ದು.ಅನ್ನವನ್ನೀಯದೇ ತಾನೇ ತಿನ್ನುವಂಥ ಸ್ವಜಾತಿಯವನು ಕೂಡ ಪರನೆಂದೇ ತಿಳಿ.ಅವನು ಸ್ವಜನನಲ್ಲ.
42. ಅನ್ನವನು ಇಕ್ಕಿ ನೀಂ | ಖಿನ್ನವನು ಪಡಬೇಡ |
ಭಿನ್ನ ಭೇದಗಳ ಇಲ್ಲದಲೆ , ಶಿವ ಜಗವ |
ನಿನ್ನು ಸಲಹುವನು ಸರ್ವಜ್ಞ ||
ಅರ್ಥ: ನೀನು ಅನ್ನವನಿಕ್ಕಿ(ಅನ್ನದಾನವ ಮಾಡಿ) ದುಃಖ ಪಡಬೇಡ.ಶಿವ ಯಾವುದೇ ತರಹದ ಭಿನ್ನ-ಭೇದಗಳಿಲ್ಲದೇ ಜಗತ್ತನ್ನು ರಕ್ಷಿಸುತ್ತಿರುವದನ್ನು ನೀನು ಮರೆಯಬೇಡ.