7. ಎತ್ತಾಗಿ ತೊತ್ತಾಗಿ | ಹಿತ್ತಲದ ಗಿಡನಾಗಿ |
ಮತ್ತೆ ಪಾಪದ ಕೆರನಾಗಿ, ಗುರುವಿನ |
ಹತ್ತಲಿರು ಎಂದ ಸರ್ವಜ್ಞ ||
ಅರ್ಥ: ಯಾವಾಗಲೂ ಗುರುವಿನ ಬಳಿಯಲ್ಲಿಯೇ ಇರು.ಗುರುವನ್ನು ಬಿಟ್ಟು ಅಗಲಬೇಡ.ಗುರುವಿನ ಆಳಾಗಿ ಇಲ್ಲವೇ ಅವನ ಪಾದರಕ್ಷೆಯಾಗಿದ್ದರೂ ಅಡ್ಡಿಯಿಲ್ಲ;ಅವನ ಬಳಿಯೇ ಇರು.
8. ಮೊಸರು ಕಡೆಯಲು ಬೆಣ್ಣೆ | ಯೊಸೆದು ತೋರುವ ತೆರದಿ |
ಹಸನಪ್ಪ ಗುರುವಿನುಪದೇಶದಿಂ , ಮುಕ್ತಿ |
ವಶವಾಗದಿಹುದೆ ಸರ್ವಜ್ಞ ||
ಅರ್ಥ: ಮೊಸರು ಕಡೆದೊಡನೆ ಬೆಣ್ಣೆಯು ಚೆನ್ನಾಗಿ ಗೋಚರವಾಗುವಂತೆ,ಒಳ್ಳೆಯ ಗುರುವಿನ ಉಪದೇಶದಿಂದ ಮುಕ್ತಿಯು ದೊರೆಯದೆ ಇರಲಾರದು.
9. ಹಂದಿ ಚಂದನದ | ಸುಗಂಧವನು ಬಲ್ಲುದೆ |
ಒಂದನು ತಿಳಿಯಲರಿಯದ , ಗುರುವಿಂಗೆ |
ನಿಂದೆಯೇ ಬಹುದು ಸರ್ವಜ್ಞ ||
ಅರ್ಥ: ಹಂದಿಯಂಥ ಕ್ಷುದ್ರಪ್ರಾಣಿಯು ಸುಗಂಧದ ಪರಿಮಳವನ್ನು ಅರಿಯಲಾರದು.ಅದರಂತೆಯೇ ಪರಬ್ರಹ್ಮನನ್ನು ಅರಿಯದಂಥ ಗುರುವು ಅಪಕೀರ್ತಿಗೊಳಗಾಗದೆ ಇರಲಾರನು.