79. ಹಲ್ಲು ಎಲುವೆಂಬುದನು | ಎಲ್ಲರೂ ಅರಿದಿಹರು |
ಹಲ್ಲಿನಿಂದೆಲ್ಲ ಜಗಿದು, ನುಂಗಿದ ಬಳಿಕ |
ಎಲ್ಲಿಯದು ಶೀಲ ಸರ್ವಜ್ಞ ||
ಅರ್ಥ: (ಬಾಯೊಳಗಿನ) ಹಲ್ಲು, ಎಲುವೆಂಬುದು ಎಲ್ಲರಿಗೂ ಗೊತ್ತಿದ್ದ ಮಾತಾಗಿದೆ. (ಹೀಗಿದ್ದರೂ) ಆ ಹಲ್ಲಿನಿಂದ ಎಲ್ಲ ಪದಾರ್ಥಗಳನ್ನು ಜಗಿದು ತಿನ್ನುತ್ತಾರೆಂದ ಮೇಲೆ (ಅವರ) ಶೀಲವೆಲ್ಲಿ ಊಳಿಯಿತು?
80. ನಡವುದೊಂದೇ ಭೂಮಿ | ಕುಡಿವುದೊಂದೇ ನೀರು |
ಸುಡುವಗ್ನಿಯೊಂದೇ ಇರುತಿರಲು, ಕುಲಗೋತ್ರ |
ನಡುವೆ ಎತ್ತಣದು ಸರ್ವಜ್ಞ ||
ಅರ್ಥ: (ಎಲ್ಲರೂ) ತಿರುಗಾಡುವಂಥ ಭೂಮಿ ಒಂದೇ; (ಎಲ್ಲರೂ) ಕುಡಿಯುವ ನೀರು ಒಂದೇ; ಹಾಗೂ ಸುಡುವಂಥ ಅಗ್ನಿಯೂ ಕೂಡ ಒಂದೇ ಇರುತ್ತಿರುವಾಗ (ಎಲ್ಲರ) ನಡುವೆ ಬರುವಂಥ ಕುಲಗೋತ್ರಗಳು ಎಲ್ಲಿಯವು?
81. ಕುಡಿವ ನೀರನು ತಂದು | ಅಡಿಗೆ ಮಾಡಿದ ಮೇಲೆ |
ಒಡಲುಣ್ಣಲಾಗದಿಂತೆಂಬ, ಮನುಜರ |
ಒಡನಾಟವೇಕೆ ಸರ್ವಜ್ಞ ||
ಅರ್ಥ: (ಎಲ್ಲರೂ) ಕುಡಿಯುವಂಥ ನೀರನ್ನೇ ತಂದು ಅಡಿಗೆ ಮಾಡಿದ ಮೇಲೆ ಅನ್ಯರನ್ನು ಜೊತೆಗೆ ಸೇರಿಸಿಕೊಂಡು ಊಟ ಮಾಡಲಾರೆ ಎಂಬುವರ ಸಹವಾಸವಾದರೂ ಏತಕ್ಕೆ? (ಬೇಡವೇ ಬೇಡ)