148. ಹೆಂಡವನು ಸುರಿಸುರಿದು | ಕಂಡವರ ತಾ ಜರಿದು |
ಬಂಡು ನುಡಿಗಳನು, ಸುರಿಯುತ್ತಲಿರುವವನ |
ಕಂಡಿಹರೆ ತೊಲಗು ಸರ್ವಜ್ಞ ||
ಅರ್ಥ: ಮೇಲಿಂದ ಮೇಲೆ ಹೆಂಡವನ್ನು ಕುಡಿಯುತ್ತ ಕಂಡವರನ್ನು ಜರಿಯುತ್ತ ಬಾಯಿಂದ ಅಪದ್ಧ ಮಾತುಗಳನ್ನಾಡುತ್ತ ತಿರುಗುವನನ್ನು ಕಂಡರೆ ಅಲ್ಲಿ ನಿಲ್ಲಬೇಡ.
149. ನೀಚ ಜನ ನೆರೆಗಿಂತ | ಈಚಲದ ಮರ ಲೇಸು |
ಈಚಲೊಂದೆಡೆ ಉಪಕಾರಿ, ನೀಚ ತಾ |
ಈಚಲಿಂ ಕೆಟ್ಟ ಸರ್ವಜ್ಞ ||
ಅರ್ಥ: ನೀಚ ಮನುಷ್ಯನ ನೆರೆಹೊರೆಯದಲ್ಲಿರುವುದಕ್ಕಿಂತ ಈಚಲ ಮರವು ಎಷ್ಟೋ ಪಾಲು ಉತ್ತಮ. ಈಚಲ ಗಿಡವು ಒಂದಿಲ್ಲೊಂದು ಕೆಲಸಕ್ಕಾದರೂ (ನೆರಳು) ಬರುತ್ತದೆ. ಆದರೆ ನೀಚನು ಮಾತ್ರ ಈಚಲಿಗಿಂತಲೂ ಕೆಟ್ಟವನಾಗಿರುತ್ತಾನೆ.
150. ಗಾಳಿದೂಳಿಯ ದಿನಕೆ | ಮಾಳಿಗೆಯ ಮನೆಲೇಸು |
ಹೋಳಿಗೆ ತುಪ್ಪ ಉಣಲೇಸು, ಬಾಯಿಗೆ |
ವೀಳೆಯೇ ಲೇಸು ಸರ್ವಜ್ಞ ||
ಅರ್ಥ: ಗಾಳಿಯ ದಿನಗಳಲ್ಲಿ ಧೂಳಿನಿಂದ ರಕ್ಷಿಸಿಕೊಳ್ಳಲು ಮಾಳಿಗೆಯ ಮನೆಯು ಒಳ್ಳೆಯದು. ಊಟ ಮಾಡಲು ಹೋಳಿಗೆ ತುಪ್ಪ ಒಳ್ಳೆಯದು. ಅದರಂತೆ ಬಾಯಿಗೆ ವೀಳ್ಯವೂ ಒಳ್ಳೆಯದು.