ಮಂಗಳವಾರ, ಸೆಪ್ಟೆಂಬರ್ 8, 2015

ಸರ್ವಜ್ಞನ ವಚನಗಳು 25-27

25.ಪಾಲಿಸುವ ಹರಿಯು ತಾ | ಸೋಲನೆಂದೆನಬೇಡ |
ಶೂಲಿ ತಾ ಮಗನ ತಲೆಜಿಗುಟೆ , ಹರಿಯೇಕೆ |
ಪಾಲಿಸದೆ ಹೋದ ಸರ್ವಜ್ಞ ||

ಅರ್ಥ: ಹರಿಯು ಸಂರಕ್ಷಕನು , ಅವನೆಂದಿಗೂ ಹಿಂಜರಿಯಲಾರನು ಎಂದು ಭಾವಿಸಬೇಡ.ಶಿವನು ಅವನ (ಹರಿಯ) ಮಗನ ತಲೆಯನ್ನೇ ಚಿವುಟಿ ಹಾಕಿದಾಗ ಹರಿಯೇಕೆ ಸಲುಹಲಿಲ್ಲ?

26. ಇಂದ್ರನಾನೆಯ | ಒಂದನೂ ಕೊಡಲರಿಯ |
ಚಂದ್ರಶೇಖರನು ಮುದಿಯತ್ತನೇರಿ , ಬೇ |
ಕೆಂದುದನು ಕೊಡುವ ಸರ್ವಜ್ಞ ||

ಅರ್ಥ: ಆನೆಯನೇರಿ ಹೊರಟರು ಇಂದ್ರನು ಏನನ್ನೂ ಕೊಡಲಸಮರ್ಥನು. ಆದರೆ ಮುದಿ ಎತ್ತಿನ ಮೇಲೆ ಕುಳಿತು ಹೊರಡುವ ಚಂದ್ರಶೇಖರ (ಶಿವ)ಬೇಡಿದ್ದನ್ನು ಕೊಡಬಲ್ಲನು.

27. ಸತ್ಯಕ್ಕೆ ಸರಿಯಿಲ್ಲ | ಚಿತ್ತಕ್ಕೆ ಸ್ಥಿರವಿಲ್ಲ |
ಹಸ್ತದಿಂದಧಿಕ ಹಿತರಿಲ್ಲ, ಪರದೈವ |
ನಿತ್ಯನಿಂದಿಲ್ಲ ಸರ್ವಜ್ಞ ||

ಅರ್ಥ: ಸತ್ಯಕ್ಕೆ ಸರಿಯಾದುದು ಚಿತ್ತಕ್ಕೆ ಸ್ಥಿರತೆಯು ಹಾಗೂ ಸ್ವಹಸ್ತಕ್ಕಿಂತ ಹೆಚ್ಚಿನ ಹಿತವಂತರು ಯಾರೂ ಇಲ್ಲ. ಅದರಂತೆ ಪರದೈವಕ್ಕೆ ಶಿವಶರಣರನ್ನುಳಿದು ಯಾರೂ ಇಲ್ಲ.