ಶನಿವಾರ, ಸೆಪ್ಟೆಂಬರ್ 26, 2015

ಸರ್ವಜ್ಞನ ವಚನಗಳು 154-156

154. ಲೆತ್ತವದು ಒಳಿತೆಂದು | ನಿತ್ಯವಾಡಲು ಬೇಡ |
ಲೆತ್ತದಿಂ ಕುತ್ತು ಮುತ್ತಿ ಬರೆ, ಸುತ್ತಲೂ |
ಕತ್ತಲಾಗಿಹುದು ಸರ್ವಜ್ಞ ||

ಅರ್ಥ: ಪಗಡೆಯಾಟವು ಒಳ್ಳೆಯದೆಂದು ಪ್ರತಿನಿತ್ಯವು ಆಡಲಿಕ್ಕೆ ಹೋಗಬೇಡ. ಅದರಿಂದ ಸಂಕಟಗಳು ಪ್ರಾಪ್ತವಾಗಿ (ನಿನಗೆ ಎಲ್ಲೆಡೆಯೂ ಕತ್ತಲೆಯೇ ಕಂಡು ಬರುವುದು).

155. ವಿದ್ಯಕ್ಕೆ ಕಡೆಯಿಲ್ಲ | ಬುದ್ಧಿಗೆ ಬೆಲೆಯಿಲ್ಲ |
ಛಿದ್ರಿಸುವವಗೆ ಗತಿಯಿಲ್ಲ, ಮರಣಕ್ಕೆ |
ಮದ್ದುಗಳಿಲ್ಲ ಸರ್ವಜ್ಞ ||

ಅರ್ಥ: ವಿದ್ಯೆಗೆ ಕೊನೆಯೇ ಇಲ್ಲ. ಅದರಂತೆ ಬುದ್ಧಿಯೂ ಅಮೂಲ್ಯವಾದುದು. (ಅದಕ್ಕೆ ಬೆಲೆ ಕಟ್ಟಲು ಯಾರಿಂದಲೂ ಸಾಧ್ಯವಿಲ್ಲ) ಚಾಡಿಕೋರನಿಗೆ ಗತಿಯಿಲ್ಲ. ಮರಣಕ್ಕೆ ಯಾವ ಔಷಧಿಯೂ ಇಲ್ಲ.

156. ವಿದ್ಯೆವುಳ್ಳವನ ಮುಖವು | ಮುದ್ದು ಬರುವಂತಿಕ್ಕು |
ವಿದ್ಯೆಯಿಲ್ಲದವನ ಬರಿ ಮುಖವು, ಹಾಳೂರ |
ಹದ್ದಿನಂತಿಕ್ಕು ಸರ್ವಜ್ಞ ||

ಅರ್ಥ: ವಿದ್ಯಾವಂತನ ಮುಖವು ಎಲ್ಲರಿಗೂ ಮುದ್ದು ಬರುವಂತಿರುತ್ತದೆ. (ಆದರೆ) ವಿದ್ಯೆ ಇಲ್ಲದವನ ಬರಿಮುಖವು ಹಾಳೂರಿನೊಳಗಿರುವ ಹದ್ದಿನಂತಿರುತ್ತದೆ.