88. ಕೊಟ್ಟವರ ತಲೆಬೆನ್ನ | ತಟ್ಟುವರು ಹಾರುವರು |
ಬಿಟ್ಟರೆ ಕುಟ್ಟಿ ಕೆಡಹುವರು, ಹಾರುವರ |
ಬಟ್ಟೆ ಬೇಡೆಂದ ಸರ್ವಜ್ಞ ||
ಅರ್ಥ: (ತಮಗೆ) ಏನಾದರೂ ಕೊಟ್ಟವರ ಬೆನ್ನನ್ನು ಹಾರುವರು ಚೆಪ್ಪರಿಸುವರು. (ಒಂದು ವೇಳೆ) ಕೊಡದೇ ಹೋದರೆ ಹೊಡೆದು ಕೆಡವುವರು. ಅದಕ್ಕಾಗಿ ಅಂಥ ಹಾರುವರ ಹಾದಿಯೇ ಬೇಡ.
89. ಅರ್ಥ ಸಿಕ್ಕರೆ ಬಿಡರು | ವ್ಯರ್ಥದಿ ಶ್ರಮ ಬಡರ |
ನರ್ಥಕ್ಕೆ ಪರರ ನೂಂಕಿಪರು, ವಿಪ್ರರಿಂ |
ಸ್ವಾರ್ಥರಿನ್ನಿಲ್ಲ ಸರ್ವಜ್ಞ ||
ಅರ್ಥ: ಈ ಬ್ರಾಹ್ಮಣರು ಹಣ ಸಿಕ್ಕರೆ ಬಿಡರಲಾರರು. ವ್ಯರ್ಥ ಶ್ರಮ ಪಡಲಾರರು. ಅಲ್ಲದೇ ಇತರರನ್ನು ಅನರ್ಥದೆಡೆಗೆ ನೂಕಲು ಹಿಂದೆ ಮುಂದೆ ನೋಡುವುದಿಲ್ಲ. ಅದಕ್ಕಾಗಿ ಬ್ರಾಹ್ಮಣನಂಥ ಸ್ವಾರ್ಥಿಗಳು ಎಲ್ಲಿಯೂ ಇಲ್ಲ.
90. ಜ್ಯೋತಿಯಿಲ್ಲದ ಮನೆಯು | ರೀತಿಯಿಲ್ಲದ |
ನೀತಿಯಿಲ್ಲದ ವಿಪ್ರನು, ಭಿಕ್ಷದ |
ಪಾತ್ರೆಯೊಡೆದಂತೆ ಸರ್ವಜ್ಞ ||
ಅರ್ಥ: ದೀಪವಿಲ್ಲದ ಮನೆಯು, ರೀತಿ-ನಡವಳಿಗಳಿಲ್ಲದಂಥ ಪತ್ನಿಯು (ಹಾಗೂ) ದುರ್ನೀತಿಯ ಬ್ರಾಹ್ಮಣನು (ಇವು ಮೂರು) ಒಡೆದು ಹೋದ ಭಿಕ್ಷಾ ಪಾತ್ರೆಯಿದ್ದಂತೆ (ಉಪಯೋಗವಿಲ್ಲದ್ದು).