ಶುಕ್ರವಾರ, ಸೆಪ್ಟೆಂಬರ್ 18, 2015

ಸರ್ವಜ್ಞನ ವಚನಗಳು 112-114

112. ಜಾಣ ಜಾಣಗೆ ಲೇಸು | ಕೋಣ ಕೋಣಗೆ ಲೇಸು |
ನಾಣ್ಯವದು ಲೇಸು ಲೋಕಕ್ಕೆ, ಊರಿಂಗೆ |
ಗಾಣಿಗನು ಲೇಸು ಸರ್ವಜ್ಞ ||

ಅರ್ಥ: ಜಾಣನು ಜಾಣನಿಗೆ, ಕೋಣವು ಕೋಣಕ್ಕೆ ಒಳ್ಳೆಯದಾಗುವಂತೆ ನಾಣ್ಯದಿಂದ ಲೋಕಕ್ಕೆ ಒಳ್ಳೆಯದಾಗುವದು. ಅದರಂತೆ ಗಾಣಿಗನೊಬ್ಬನಿದ್ದರೆ ಊರಿಗೆ ಒಳ್ಳೆಯದು.

113.ಮುನ್ನ ಮಾಡಿದ ಪಾಪ | ಹೊನ್ನಿಂದ ಪೋಪುದೇ? |
ಹೊನ್ನಿನಾ ಪುಣ್ಯವದು ಬೇರೆ, ಪಾಪ ತಾ |
ಮುನ್ನಿನಂತಿಹುದು ಸರ್ವಜ್ಞ ||

ಅರ್ಥ: ಮೊದಲು ಮಾಡಿದಂಥ ಪಾಪವು ಹೊನ್ನಿನಿಂದ ಹೋಗುವುದೇ? (ಅಂದರೆ ಹೊನ್ನಿನ ದಾನದಿಂದ) ಆದರೆ ಹೊನ್ನಿನಿಂದ ಸಂಚಯವಾಗುವ ಪುಣ್ಯ ಮಾತ್ರ ಬೇರೆ. ಪಾಪವು ಮೊದಲಿನಂತೆಯೇ ಉಳಿದುಕೊಳ್ಳುವುದು.

114. ಅರಿಯದೆಸಗಿದ ಪಾಪ | ಅರಿತರದು ತನಗೊಳಿತು |
ಅರಿತರಿತು ಮಾಡಿ ಮರೆತದು, ನಯನವನು |
ಇರಿದುಕೊಂಡಂತೆ ಸರ್ವಜ್ಞ ||

ಅರ್ಥ: (ಒಂದು ಸಲ) ಅರಿಯದಂಥ ಮಾಡಿದ ಪಾಪದ ಬಗ್ಗೆ ತಿಳಿದುಕೊಂಡು ಅದನ್ನು ಬಿಟ್ಟರೆ ಅದು (ಅವನಿಗೇ) ಒಳ್ಳೆಯದು. ಒಂದು ವೇಳೆ ಅದು ಪಾಪವೆಂದು ಅರಿತ ನಂತರವೂ ಮತ್ತೆ ಪಾಪ ಮಾಡಿ ಮರೆತರೆ (ತನ್ನ) ಕಣ್ಣೊಳಗೆ (ತಾನೇ) ಇರಿದುಕೊಂಡಂತಾಗುವುದು.