ಸೋಮವಾರ, ಸೆಪ್ಟೆಂಬರ್ 14, 2015

ಸರ್ವಜ್ಞನ ವಚನಗಳು 82-84

82. ಅವಯವಗಳೆಲ್ಲರಿಗೆ | ಸಮನಾಗಿ ಇರುತಿರಲು |
ಭವಿ, ಭಕ್ತ, ಶ್ವಪಚ, ಶೂದ್ರರಿವರಿಂತೆಂಬ |
ಕವನವೆತ್ತಣದು ಸರ್ವಜ್ಜ ||

ಅರ್ಥ: ಎಲ್ಲರಿಗೂ ಒಂದೇ ರೀತಿಯ ಅವಯವಗಳಿರುತ್ತಿರಲು ಇವನು ಶ್ರೇಷ್ಠ, ಇವನು ಕನಿಷ್ಠ, ಇವನು ಶೂದ್ರನೆಂಬ ಸುಳ್ಳು ಕಥೆಯಲ್ಲಿಹುದು? (ಅದರಲ್ಲಿ ಹುರುಳಿಲ್ಲವೆಂಬರ್ಥ).

83. ಜಾತಿ ಹೀನನ ಮನೆಯ | ಜ್ಯೋತಿ ತಾ ಹೀನವೇ? |
ಜಾತಿ ವಿಜಾತಿ ಎನಬೇಡ, ದೇವನೊಲಿ |
ದಾತನೇ ಜಾತ! ಸರ್ವಜ್ಞ ||

ಅರ್ಥ: ಜಾತಿಹೀನನೆಂಬುವವನ ಮನೆಯಲ್ಲಿಯ ಜಾತಿಯೂ ಹೀನವೇ? (ತನ್ನ) ಜಾತಿ - ಪರಜಾತಿಯೆಂದು ಭೇದವನ್ನಿಡಬೇಡ; ದೇವರನ್ನೊಲಿಸಿ ಕೊಂಡವನೇ ಉತ್ತಮ ಜಾತಿಯವನು.

84. ಹಸಿವಿಲ್ಲದುಣಬೇಡ | ಹಸಿದು ಮತ್ತಿರಬೇಡ |
ಬಿಸಿಗೂಡಿ ತಂಗುಳುಣಬೇಡ, ವೈದ್ಯನ |
ಬೆಸಸಲೇ ಬೇಡ ಸರ್ವಜ್ಞ ||

ಅರ್ಥ: ಹಸಿವು ಇಲ್ಲದೆ ಊಟ ಮಾಡಬೇಡ, ಹಸಿವಾಗಿದ್ದರೆ ಮಾತ್ರ ಊಟ ಮಾಡದೆ ಇರಬೇಡ. ಬಿಸಿಯಲ್ಲಿ ತಂಗಳ ಬೆರೆಸಿದ ಅನ್ನವನ್ನು ಉಣಬೇಡ. ಅಂದರೆ ಯಾವಾಗಲೂ ವೈದ್ಯನಿಂದ ದೂರವಿರುವಿ.