ಶನಿವಾರ, ಅಕ್ಟೋಬರ್ 3, 2015

ಸರ್ವಜ್ಞನ ವಚನಗಳು 202-204

202. ಅಗ್ಗ ಬಡವಗೆ ಲೇಸು | ಬುಗ್ಗೆಯಗಸಗೆ ಲೇಸು |
ತಗ್ಗಿದ ಗದ್ದೆ ಉಳಲೇಸು, ಜೇಡಂಗೆ |
ಮಗ್ಗ ಲೇಸೆಂದ ಸರ್ವಜ್ಞ ||
ಅರ್ಥ: ಅಗ್ಗವಿದ್ದಂಥ (ವಸ್ತುಗಳು) ಬಡವನಿಗೆ, (ನೀರಿನ) ಬುಗ್ಗೆಯು ಅಗಸನಿಗೆ, ತಗ್ಗಿನಲ್ಲಿದ್ದ ಗದ್ದೆಯು ಬಿತ್ತನೆಯ ಕೆಲಸಕ್ಕೆ ಯೋಗ್ಯವಿರುವಂತೆ ನೇಕಾರನಿಗೆ ಮಗ್ಗವೇ ಲೇಸು.
 203. ಬೇಡಗಡವಿಯ ಚಿಂತೆ | ಆಡಿಂಗೆ ಮಳೆಚಿಂತೆ |
ನೋಡುವ ಚಿಂತೆ ಕಂಗಳಿಗೆ, ಹೆಳವಗೆ |
ದ್ದಾಡುವ ಚಿಂತೆ ಸರ್ವಜ್ಞ ||
ಅರ್ಥ: ಬೇಡನಿಗೆ ಅಡವಿಯ ಚಿಂತೆ, ಆಡಿಗೆ ಮಳೆಯ ಬಯಕೆ, ಕಣ್ಣುಗಳಿಗೆ (ಏನಾದರೂ) ನೋಡುವ ಚಿಂತೆಯಿರುವಂತೆ ಹೆಳವನಿಗೆ ಎದ್ದು ತಿರುಗಾಡುವ ಚಿಂತೆ ಬಿಡದು.
204. ಬೇಡನೊಳ್ಳಿದನೆಂದು | ಆಡದಿರು ಸಭೆಯೊಳಗೆ |
ಬೇಡ ಬೇಡಿದರೆ ಕೊಡದಿರೆ, ಬಯ್ಗಿಂಗ |
ಗೋಡೆಯನ್ನು ಒಡೆವ ಸರ್ವಜ್ಞ ||
ಅರ್ಥ: ಬೇಡರವನು ಒಳ್ಳೆಯವನೆಂದು ಸಭೆಯಲ್ಲಿ ಹೇಳಬೇಡ. (ಏಕೆಂದರೆ) ಅವನು ಬೇಡಿದ್ದನ್ನು (ನೀನು) ಕೊಡದೆ ಹೋದೆಯಾದರೆ ರಾತ್ರಿಯ ಸಮಯದಲ್ಲಿ ಗೋಡೆಗೆ ಕನ್ನವಿಕ್ಕುವನು.