ಶನಿವಾರ, ಅಕ್ಟೋಬರ್ 3, 2015

ಸರ್ವಜ್ಞನ ವಚನಗಳು 202-204

202. ಅಗ್ಗ ಬಡವಗೆ ಲೇಸು | ಬುಗ್ಗೆಯಗಸಗೆ ಲೇಸು |
ತಗ್ಗಿದ ಗದ್ದೆ ಉಳಲೇಸು, ಜೇಡಂಗೆ |
ಮಗ್ಗ ಲೇಸೆಂದ ಸರ್ವಜ್ಞ ||
ಅರ್ಥ: ಅಗ್ಗವಿದ್ದಂಥ (ವಸ್ತುಗಳು) ಬಡವನಿಗೆ, (ನೀರಿನ) ಬುಗ್ಗೆಯು ಅಗಸನಿಗೆ, ತಗ್ಗಿನಲ್ಲಿದ್ದ ಗದ್ದೆಯು ಬಿತ್ತನೆಯ ಕೆಲಸಕ್ಕೆ ಯೋಗ್ಯವಿರುವಂತೆ ನೇಕಾರನಿಗೆ ಮಗ್ಗವೇ ಲೇಸು.
 203. ಬೇಡಗಡವಿಯ ಚಿಂತೆ | ಆಡಿಂಗೆ ಮಳೆಚಿಂತೆ |
ನೋಡುವ ಚಿಂತೆ ಕಂಗಳಿಗೆ, ಹೆಳವಗೆ |
ದ್ದಾಡುವ ಚಿಂತೆ ಸರ್ವಜ್ಞ ||
ಅರ್ಥ: ಬೇಡನಿಗೆ ಅಡವಿಯ ಚಿಂತೆ, ಆಡಿಗೆ ಮಳೆಯ ಬಯಕೆ, ಕಣ್ಣುಗಳಿಗೆ (ಏನಾದರೂ) ನೋಡುವ ಚಿಂತೆಯಿರುವಂತೆ ಹೆಳವನಿಗೆ ಎದ್ದು ತಿರುಗಾಡುವ ಚಿಂತೆ ಬಿಡದು.
204. ಬೇಡನೊಳ್ಳಿದನೆಂದು | ಆಡದಿರು ಸಭೆಯೊಳಗೆ |
ಬೇಡ ಬೇಡಿದರೆ ಕೊಡದಿರೆ, ಬಯ್ಗಿಂಗ |
ಗೋಡೆಯನ್ನು ಒಡೆವ ಸರ್ವಜ್ಞ ||
ಅರ್ಥ: ಬೇಡರವನು ಒಳ್ಳೆಯವನೆಂದು ಸಭೆಯಲ್ಲಿ ಹೇಳಬೇಡ. (ಏಕೆಂದರೆ) ಅವನು ಬೇಡಿದ್ದನ್ನು (ನೀನು) ಕೊಡದೆ ಹೋದೆಯಾದರೆ ರಾತ್ರಿಯ ಸಮಯದಲ್ಲಿ ಗೋಡೆಗೆ ಕನ್ನವಿಕ್ಕುವನು.

ಸರ್ವಜ್ಞನ ವಚನಗಳು 199-201

199. ಹೆಂಡತಿಗೆ ಅಂಜುವ | ಗಂಡನಂ ಏನೆಂಬೆ |
ಹಿಂಡು ಕೋಳಿಗಳ ಮರಿ ತಿಂಬ ನರಿ, ನಾಯಿ |
ಕಂಡೋಡಿದಂತೆ ಸರ್ವಜ್ಞ ||
ಅರ್ಥ: ಹೆಂಡತಿಗೆ ಅಂಜುವಂಥ ಗಂಡನಿಗೆ ಏನೆನ್ನಬೇಕು? ಕೋಳಿಗಳ ಹಿಂಡನ್ನೇ ಮುರಿದು ತಿನ್ನುವ ನರಿಯು ನಾಯಿಯನ್ನು ಕಂಡು ಓಡಿದ ಹಾಗೆಯೇ ಸರಿ.

AMAZING BOOK

200. ವಾಜಿ ಹಾರುವದಲ್ಲ | ತೇಜಿ ಹೇರುವದಲ್ಲ |
ಗಾಜಿನ ಕುಣಿಕೆ ಮಣಿಯಲ್ಲ, ಅತ್ತಿ ಫಲ |
ಬೀಜದೊಳಗಲ್ಲ ಸರ್ವಜ್ಞ ||
ಅರ್ಥ: ಕುದುರೆಯು ಹಾರುವುದಕ್ಕಲ್ಲ, ಭಾರವನ್ನು ಹೊರುವುದಕ್ಕೂ ಅಲ್ಲ. ಗಾಜಿನ ಕುಣಿಕೆಯು ಮಣಿಯೂ ಅಲ್ಲ. (ಅದರಂತೆ) ಅತ್ತಿಯ ಹಣ್ಣು ಬೀಜದೊಳಗೆ ಎಣಿಸಲ್ಪಡುವುದಿಲ್ಲ.
201. ಗಾಣಿಗನು ಈಶ್ವರ | ಕಾಣನೆಂಬುದು ಸಹಜ |
ಏಣಾಂಕಧರನು, ಧರೆಗಿಳಿಯಲವನಿಂದ |
ಗಾಣವಾಡಿಸುವ ಸರ್ವಜ್ಞ ||
ಅರ್ಥ: ಗಾಣಿಗನು ಈಶ್ವರನನ್ನು ಕಂಡಿಲ್ಲವೆಂಬುದು ನಿಜ; (ಆದರೆ ಒಂದು ವೇಳೆ) ಮಹದೇವನೇ ಅವನ ಬಳಿ ಇರುವುದಾದರೆ (ಗಾಣಿಗನು) ಶಿವನಿಗೂ ಗಾಣ ತಿರುಗಿಸಲು ಹಚ್ಚದೇ ಬಿಡಲಾರನು.

ಶುಕ್ರವಾರ, ಅಕ್ಟೋಬರ್ 2, 2015

ಸರ್ವಜ್ಞನ ವಚನಗಳು 196-198

196. ಹರದನ ಮಾತನ್ನು | ಹಿರಿದು ನಂಬಲು ಬೇಡ |
ಗರಗಸದೊಡನೆ ಮರಹೋರಿ, ತನ್ನ ತಾ |
ನಿರಿದುಕೊಂಡಂತೆ ಸರ್ವಜ್ಞ ||
ಅರ್ಥ: ವ್ಯಾಪಾರಸ್ಥನ ಮಾತಿನಲ್ಲಿ ಹೆಚ್ಚಿನ ನಂಬಿಕೆಯನ್ನಿರಿಸಬೇಡ. (ಒಂದು ವೇಳೆ ಹಾಗೆ ಮಾಡಿದರೆ) ಗರಗಸದೊಂದಿಗೆ ಕಟ್ಟಿಗೆಯ ತುಂಡು ಹೋರಾಡಿ ತನ್ನನ್ನೇ ತಾನು ಇರಿದುಕೊಂಡು ನಾಶವಾದಂತಾಗುತ್ತದೆ.

Pen Camera Video Recorder

197. ಪಂಚಾಳರೈವರು | ವಂಚನೆಗೆ ಗುರುವರು |
ಕಿಂಚಿತ್ತು ನಂಬಿ ಕೆಡಬೇಡ, ತಿರುಗುಣಿಯ |
ಮಂಡದಂತಿಹರು ಸರ್ವಜ್ಞ ||
ಅರ್ಥ: ಐದು ವಿಧಧ ಪಂಚಾಳರು ವಂಚಕತನದಲ್ಲಿ ಎತ್ತಿದ ಕೈಯಾಗಿರುತ್ತಾರೆ. (ಅದಕ್ಕಾಗಿ ಅವರನ್ನು) ಎಳ್ಳಷ್ಟೂ ನಂಬಿ ಕೆಡಬೇಡ; ಅವರು ತಿರುಗುಣಿಯ ಮಾಡುವಿನಂತಿರುತ್ತಾರೆ.
198. ಕಳ್ಳನೂ ಒಳ್ಳಿದರೂ | ಎಲ್ಲ ಜಾತೆಯೊಳಿಹರು |
ಕಳ್ಳನೊಂದಡೆ ಉಪಕಾರಿ, ಪಾಂಚಾಳ |
ನೆಲ್ಲರಲಿ ಕಳ್ಳ ಸರ್ವಜ್ಞ ||
ಅರ್ಥ: ಒಳ್ಳೆಯವರು ಹಾಗೂ ಕಳ್ಳವರು ಎಲ್ಲ ಜಾತಿಗಳಲ್ಲಿಯೂ ಇರುತ್ತಾರೆ. (ಕೆಲ ಸಮಯಗಳಲ್ಲಿ) ಕಳ್ಳನಿಂದ ಉಪಕಾರವಾದರೂ ಆಗಬಹುದು. (ಆದರೆ) ಪಂಚಾಳರು (ಬಡಿಗ, ಹಜಾಮ, ಅಗಸ, ನೇಕಾರ, ಮಚೆಗಾರ ಇವರಿಗೆ ಪಂಚಾಳರು ಅನ್ನುತ್ತಾರೆ) ಎಲ್ಲರಿಗಂತ ಹೆಚ್ಚಿನ ಕಳ್ಳರು.

ಸರ್ವಜ್ಞನ ವಚನಗಳು 193-195

193. ಹಣಜಿ ಬತ್ತವು ಅಲ್ಲ | ಅಣಬೆ ಸತ್ತಿಗೆಯಲ್ಲ |
ಕಣಕದ ಕಲ್ಲು ಮಣಿಯಲ್ಲ, ಬಣಜಿಗನು |
ಗುಣವಂತನಲ್ಲ ಸರ್ವಜ್ಞ ||

ಅರ್ಥ: ಹಣಜಿಯು (ಒಂದು ತರಹದ ಕಲ್ಲು) ಬತ್ತವಾಗಲಾರದು. ನಾಯಿ ಕೊಡೆಯು ಕೊಡೆಯಾಗಲಾರದು. ಕಣಕವನ್ನರಿಯುವ ಕಲ್ಲು ಮಣಿಯಾಗಬಾರದು. ಅದರಂತೆ ಬಣಜಿಗನು ಗುಣವಂತನಾಗಲಾರನು.

194. ಎಳ್ಳು ಗಾಣಿಗಬಲ್ಲ | ಸುಳ್ಳು ಸಿಂಪಿಗ ಬಲ್ಲ |
ಕಳ್ಳರನು ಬಲ್ಲ ತಳವಾರ, ಬಣಜಿಗನು |
ಎಲ್ಲ ಬಲ್ಲ ಸರ್ವಜ್ಞ ||

ಅರ್ಥ: ಗಾಣಿಗರವನು ಎಳ್ಳನ್ನೂ, ಸಿಂಪಿಗರನು ಸುಳ್ಳು ಹೇಳುವುದನ್ನೂ ಹಾಗೂ ತಳವಾರನು (ವಾಲೀಕಾರ) ಕಳ್ಳನನ್ನೂ ಬಲ್ಲವನಾದರೆ ಬಣಜಿಗನು ಮಾತ್ರ ಎಲ್ಲರನ್ನೂ ಬಲ್ಲವನಾಗಿರುತ್ತಾನೆ.

195. ಕೊಂಬು ಹೋರಿಗೆ ಲೇಸು | ತುಂಬು ಕೇರಿಗೆ ಲೇಸು |
ಕುಂಬಾರ ಲೇಸು ಊರಿಂಗೆ, ಹರದಂಗೆ |
ನಂಬುಗೆಯೇ ಲೇಸು ಸರ್ವಜ್ಞ ||

ಅರ್ಥ: ಹೋರಿಗೆ ಕೊಂಬುಗಳು, ಓಣಿಗೆ ಜನವಸತಿಯು, ಊರಿಗೆ ಕುಂಬಾರನು ಶೋಭಾಯಮಾನವಾಗುವಂತೆ ವ್ಯಾಪಾರಸ್ಥನಿಗೆ ನಂಬುಗೆಯೇ ಭೂಷಣವು.

ಗುರುವಾರ, ಅಕ್ಟೋಬರ್ 1, 2015

ಸರ್ವಜ್ಞನ ವಚನಗಳು 190-192

190. ಬೂದಿಯೊಳು ಹುದುಗಿಸುತ | ವೇದಿಸುತ ಮರೆಮಾಡಿ |
ಕಾದಿರ್ದ ಚಿನ್ನದೊಳು ಬೆರೆಸಿ, ಒರೆಹಚ್ಚಿ |
ಊದುತಲೆ ಟೊಣೆವ ಸರ್ವಜ್ಞ ||

ಅರ್ಥ: (ಬಂಗಾರವನ್ನು) ಬೂದಿಯೊಳಗೆ ಮುಚ್ಚಿಡುತ್ತ (ಗಿರಾಕಿ) ನೋಡುತ್ತಿರುವಂತೆಯೆ ಮರೆಮಾಡಿ ಕಾಯ್ದ ಬಂಗಾರದೊಳಗೆ ಕುದಿಸಿ ಒರೆಹಚ್ಚಿ ಊದುತ್ತಿರುವಂತೆಯೇ (ಅಕ್ಕಸಾಲಿಗನು) ಹಾರಿಸಿಬಿಡುವನು.

191. ಅಕ್ಕಸಾಲೆಯ ಮಗುವು | ಚಿಕ್ಕದೆಂದೆನಬೇಡ |
ಚಿಕ್ಕಟವು ಮೈಯ್ಯ ಕಡಿವಂತೆ, ಚಿಮ್ಮಟವ |
ನಿಕ್ಕುತ್ತಲೆ ಕಳೆವ ಸರ್ವಜ್ಞ ||

ಅರ್ಥ: ಅಕ್ಕಸಾಲಿಗನ ಮಗನನ್ನು ಚಿಕ್ಕವನೆಂದು ಭಾವಿಸಬೇಡ. ಅತಿ ಚಿಕ್ಕದಾದ ಚಿಕ್ಕಾಡು ಮೈತುಂಬ ಕಡಿವಂತೆ ಅವನು (ಚಿಮ್ಮಟಗೆ ಬರುತ್ತಲೇ) ತನ್ನ 'ಉದ್ಯಮ' ವನ್ನು ಪ್ರಾರಂಭಿಸುವನು.

192. ಅಡ್ಡ ಬಡ್ಡಿಯೂ ಹೊಲ್ಲ | ಗಿಡ್ಡ ಬಾಗಿಲ ಹೊಲ್ಲ |
ಹೆಡ್ಡರೊಡನಾಟ ಹೊಲ್ಲ, ಬಡಿಗ ತಾ |
ರೊಡ್ಡನಿರೆ ಹೊಲ್ಲ ಸರ್ವಜ್ಞ ||

ಅರ್ಥ: ಅಡ್ಡವಾದಂಥ ಬಡ್ಡೆಯು ಅಯೋಗ್ಯವಾದುದು. ಮೂರ್ಖರ ಸಂಗವು ಒಳ್ಳೆಯದಲ್ಲ. ಅದರಂತೆ ಎಡಗೈಯಿಂದ ಕೆಲಸ ಮುಡುವಂಥ ಬಡಿಗನೂ ನಿರುಪಯೋಗಿಯು.

ಸರ್ವಜ್ಞನ ವಚನಗಳು 187-189

187. ಉದ್ದರಿಯ ಕೊಟ್ಟಣ್ಣ | ಹದ್ದಾದ ಹಾವಾದ |
ಎದ್ದೆದ್ದು ಹರಿವ ನಾಯಾದ, ಹುತ್ತದ |
ಗೊದ್ದದಂತಾದ ಸರ್ವಜ್ಞ ||
Click here to Browse free internet
ಅರ್ಥ: (ಯಾವುದಾದರೊಂದು) ಉದ್ದರಿಯಾಗಿ ಕೊಟ್ಟಂಥವನು ಹದ್ದಿನಂತೆ, ಹಾವಿನಂತೆ ಹಾಗೂ ಎದ್ದೆದ್ದು ಕಚ್ಚಲು ಬರುವ ನಾಯಿಯಂತಾಗುವನಲ್ಲದೆ ಹುತ್ತದೊಳಗಿನ ಇರುವೆಯಂತೆಯೂ ಆಗುತ್ತಾನೆ.
188. ಹಾಲು ಬೋನಕೆ ಲೇಸು | ಮಾಲೆ ಕೊರಳಿಗೆ ಲೇಸು |
ಸಾವಿಲ್ಲದವನ ಮನೆ ಲೇಸು, ಬಾಲರ |
ಲೀಲೆ ಲೇಸೆಂದ ಸರ್ವಜ್ಞ ||
ಅರ್ಥ: (ಊಟಕ್ಕೆ) ಹಾಲು ಬಹಳ ಒಳ್ಳೆಯದು. (ಹೂವಿನ) ಮಾಲೆಯು ಕೊರಳಿಗೆ ಶೋಭೆಯನ್ನುಂಟು ಮಾಡುವುದು. ಯಾರ ಮನೆಯಲ್ಲಿ ಸಾವೇ ಕಂಡಿಲ್ಲವೋ ಅಂಥ ಮನೆ ಲೇಸು. (ಅದರಂತೆ) ಚಿಕ್ಕ ಬಾಲಕರ ಲೀಲೆಯು ಇನ್ನೂ ಒಳ್ಳೆಯದು (ಮನಕ್ಕೆ ಆಹ್ಲಾದ ನೀಡುವುದು).
189. ಅಕ್ಕಸಾಲೆಯನೂರಿ | ಗೊಕ್ಕಲೆಂದೆನಬೇಡ |
ಬೆಕ್ಕುಬಂದಿಲಿಯ ಹಿಡಿವಂತೆ, ಊರಿಗವ |
ರಕ್ಕಸನು ನೋಡ ಸರ್ವಜ್ಞ ||
ಅರ್ಥ: ಅಕ್ಕಸಾಲಿಗನನ್ನು ಒಂದೂರಿನ ಒಕ್ಕಲು ಮನೆತನಸ್ಥ ಎಂದು ಭಾವಿಸಬೇಡ. ಬೆಕ್ಕು (ಸದ್ದಿಲ್ಲದೇ) ಬಂದು ಇಲಿಯನ್ನು ಹಿಡಿದು ತಿನ್ನುವಂತೆ ಅವನು (ಅಕ್ಕಸಾಲಿಗನು) ಊರಿಗೊಬ್ಬ ರಾಕ್ಷಸನಿದ್ದಂತೆ (ಆಗುವನು).

ಬುಧವಾರ, ಸೆಪ್ಟೆಂಬರ್ 30, 2015

ಸರ್ವಜ್ಞನ ವಚನಗಳು 184-186

184. ಸಾಲವನು ತರುವಾಗ | ಹಾಲುಬೋನುಂಡಂತೆ |
ಸಾಲಿಗನು ಬಂದು ಕೇಳಿದರೆ, ಕುಂಡೆಗೆ |
ಚೇಳು ಕಡಿದಂತೆ ಸರ್ವಜ್ಞ ||

ಅರ್ಥ: (ಎರಡನೆಯವರಿಂದ) ಸಾಲವನ್ನು ತೆಗೆದುಕೊಂಡು ಬರುವಾಗ ಹಾಲು-ಅನ್ನವನ್ನು ಉಂಡಂತಾಗುತ್ತದೆ. (ಆದರೆ) ಅದನ್ನೇ ಅವನು ಮರಳಿ ಕೇಳಲು ಬಂದಾಗ (ಮಾತ್ರ) ತಿಗಕ್ಕೆ ಚೇಳು ಕಡಿದಂತಾಗುತ್ತದೆ.

185. ನೂರು ಹಣ ಕೊಡುವ ತನಕ | ಮೀರಿ ವಿನಯದಲಿಪ್ಪ |
ನೂರರೋಳ್ಮೂರ ಕೇಳಿದರೆ, ಸಾಲಿಗನು |
ತೂರುವನು ಮಣ್ಣು ಸರ್ವಜ್ಞ ||

ಅರ್ಥ: ಸಾಲವನ್ನು ಕೊಡುತ್ತಿರುವವರೆಗೆ ಅದು ನೂರಿರಲಿ, ಎಷ್ಟೇ ಇರಲಿ ಅವನೊಂದಿಗೆ (ಸಾಲ ತೆಗೆದುಕೊಳ್ಳುವವನು) ಅತಿಯಾದ ವಿನಯದಿಂದ ನಡೆದುಕೊಳ್ಳುತ್ತಾನೆ; ಆದರೆ (ಕೊಟ್ಟವನು ತಾನು ಕೊಟ್ಟಿದ್ದರಲ್ಲಿಯ ಕೇವಲ) ಎರಡು-ಮೂರು ರೂಪಾಯಿಗಳನ್ನು ಮರಳಿ ಕೇಳಿದರೆ ಮಾತ್ರ ಅವನ ಮೇಲೆ ಮಣ್ಣು ತೂರಲು ಪ್ರಾರಂಭಿಸುವನು.

186. ಗಡ್ಡವಿಲ್ಲದವನ ಮೋರೆ | ದುಡ್ಡು ಇಲ್ಲದ ಚೀಲ |
ಬಡ್ಡಿ ಸಾಲ ತರುವವನ, ಬಾಳುವೆಯು |
ಅಡ್ಡಕ್ಕೂ ಬೇಡ ಸರ್ವಜ್ಞ ||

ಅರ್ಥ: ಗಡ್ಡವಿಲ್ಲದವನ ಮೋರೆಯು (ಮುಖವು) ಹಣವಿಲ್ಲದಂಥ ಬರಿಯ ಚೀಲವು ಹಾಗೂ ಬಡ್ಡಿಯ ಸಾಲವನ್ನು ತರುತ್ತಲೇ ಇರುವಂಥವನ ಬಾಳುವೆಯು ಇವು ಮೂರು ಯಾತಕ್ಕೂ ಬೇಡ.